ರಾಘು ಥ್ರಿಲ್ಲಿಂಗ್ ಕಥೆಯಲ್ಲಿ ಹಲವಾರು ತಿರುವುಗಳು - 3/5 ***
Posted date: 29 Sat, Apr 2023 01:47:44 PM
ಒಬ್ಬನೇ ಕಲಾವಿದ ಇಡೀ ಚಿತ್ರವನ್ನು ಕ್ಯಾರಿ ಮಾಡುವುದು ಸುಲಭದ ಮಾತಲ್ಲ, ಅದಕ್ಕೆ ಸೂಕ್ತವಾದ ಕಥಾಹಂದರ, ದೃಶ್ಯಗಳ ಜೋಡಣೆ, ಕಲಾವಿದನ ಅಭಿನಯ ಎಲ್ಲವೂ ಇಲ್ಲಿ ಪರಿಗಣನೆಗೆ ಬರುತ್ತದೆ. ಪ್ರೇಕ್ಷಕನ ದೃಷ್ಟಿ ಆ ಕಲಾವಿದನ ಮೇಲೇ ಇರುತ್ತದೆ.  ವಿಜಯ್ ರಾಘವೇಂದ್ರ ಅಭಿನಯದ `ರಾಘು`ಏಕವ್ಯಕ್ತಿ ಚಿತ್ರವಾಗಿ  ಈವಾರ ಪ್ರೇಕ್ಷಕರ ಮುಂದೆ ಬಂದಿದೆ. ಇದೊಂದು ಪ್ರಯೋಗಾತ್ಮಕ  ಚಿತ್ರವಾಗಿದ್ದು, ಕೊರೋನಾ ಲಾಕ್‌ಡೌನ್ ಸಮಯದಲ್ಲಿ  ರಾಘು (ವಿಜಯ್ ರಾಘವೇಂದ್ರ) ಎಂಬ  ಮೆಡಿಕಲ್ ಎಕ್ಸಿಕ್ಯುಟಿವ್  ಸುತ್ತ ನಡೆಯುವ  ಥ್ರಿಲ್ಲರ್ ಕಥೆಯನ್ನು  ನಿರ್ದೇಶಕ ಆನಂದರಾಜ್ ಅವರು ಕುತೂಹಲಕರವಾಗಿ  ಹೇಳಿದ್ದಾರೆ.  ಮೆಡಿಸಿನ್‌  ಸಪ್ಲೈ  ಮಾಡುವ ರಾಘು ಒಬ್ಬ ಕಳ್ಳ ಕೂಡ,  ಹಗಲು ಮೆಡಿಸಿನ್ ವಿತರಣೆ ಮಾಡುತ್ತ, ಅದೇ ಮನೆಯಲ್ಲಿ ರಾತ್ರಿ ಗೆಳೆಯ ಮುನ್ನಾ ಜೊತೆ ಸೇರಿ ಕಳ್ಳತನ  ಮಾಡುವುದು ಆತನ ಕೆಲಸ.  ಕೋವಿಡ್ ಲಾಕ್‌ಡೌನ್ ಸಮಯದಲ್ಲೂ  ಈತ ಆರಾಮಾಗಿ ಎಲ್ಲ ಕಡೆಯೂ ಓಡಾಡಿಕೊಂಡಿರುತ್ತಾನೆ. 

ಒಂದು ರಾತ್ರಿ ಇದ್ದಕ್ಕಿದ್ದಂತೆಯೇ ರಾಘು ಫೋನಿಗೆ  ಒಂದು ಕರೆ ಬರುತ್ತದೆ. ಅಲ್ಲಿಂದ ರಾಘು ಬದುಕಿನಲ್ಲಿ  ಸಾಕಷ್ಟು ತಿರುವುಗಳು ಎದುರಾಗುತ್ತವೆ. ರಾಘು ಅಸಹಾಯಕತೆಯನ್ನು ಬಳಸಿಕೊಂಡು ಆ ವ್ಯಕ್ತಿ ತನ್ನ ಕೆಲಸಗಳನ್ನೆಲ್ಲ ಮಾಡಿಸಿಕೊಳ್ಳುತ್ತಾನೆ. ಒಂದೇ  ರಾತ್ರಿ ನಡೆಯುವ ಹಲವಾರು ಘಟನೆಗಳಿಂದ  ರಾಘು  ಜರ್ಜರಿತನಾಗುತ್ತಾನೆ. ಅಷ್ಟಕ್ಕೂ  ಆತನಿಗೆ ಕಾಲ್ ಮಾಡಿ ತೊಂದರೆ ಕೊಡುತ್ತಿರುವ ಆ ವ್ಯಕ್ತಿ  ಯಾರು?  ಅಷ್ಟಕ್ಕೂ ಆ ರಾತ್ರಿ ರಾಘುಗೆ ಏನಾಗುತ್ತದೆ ಎಂಬ ಎಲ್ಲ  ಪ್ರಶ್ನೆಗಳಿಗೆ ಉತ್ತರ ಚಿತ್ರದ ಕೊನೆಯಲ್ಲಿದೆ. ನಾಯಕ  ವಿಜಯ್ ರಾಘವೇಂದ್ರ ಅವರಿಗೆ ಎರಡು ಶೇಡ್ ಇರುವ  ಪಾತ್ರವಿದ್ದು, ಇಡೀ ಸಿನಿಮಾವನ್ನು ಅವರೊಬ್ಬರೇ ಕ್ಯಾರಿ ಮಾಡಿಕೊಂಡು ಹೋಗಿದ್ದಾರೆ.  ವಿಜಯ್ ರಾಘವೇಂದ್ರ ಅವರನ್ನು ಬಿಟ್ಟರೆ ಬೇರೆ ಯಾವ ಪಾತ್ರವೂ  ಚಿತ್ರದಲ್ಲಿ ಕಾಣಿಸುವುದಿಲ್ಲ. ಆದರೆ ಒಂದಷ್ಟು ಪಾತ್ರಗಳ ಮಾತುಗಳಷ್ಟೇ ಕೇಳುತ್ತದೆ. 

ನಾಯಕನ ಕೈಲಿ ತನಗೆ ಬೇಕಾದ ಎಲ್ಲ ಕೆಲಸಗಳನ್ನು ಆ ಅನಾಮಿಕ  ಮಾಡಿಸಿಕೊಳ್ಳುತ್ತಾನೆ.  ಮೆಡಿಕಲ್ ವ್ಯಾನಿನ ಮೂಲಕ ಡ್ರಗ್  ಸಾಗಿಸುವುದು,  ಹೂತಿದ್ದ ಶವದ ಕೈಬೆರಳಿನಿಂದ ಬೆರಳಚ್ಚನ್ನು ಸಂಗ್ರಹಿಸಿ ತರುವುದು, ಅದರ ಸಹಾಯದಿಂದ ಆನ್‌ಲೈನ್  ಮೂಲಕ  ಕೋಟಿಗಟ್ಟಲೆ ಹಣವನ್ನು ವರ್ಗಾಯಿಸಿಕೊಳ್ಳುವುದು, ಪೊಲೀಸ್ ಸ್ಟೇಷನ್‌ನಿಂದ ಮುಖ್ಯ ದಾಖಲೆಗಳನ್ನು ಕದ್ದು ತರುವುದು, ಹೀಗೆ ಮಾಡಬಾರದ ಕೆಲಸಗಳನ್ನೆಲ್ಲ  ರಾಘು ಮಾಡಬೇಕಾಗುತ್ತದೆ. ಆಗುಂತಕನೊಬ್ಬನಿಂದ ಬರೋ ಕಾಲ್ ಆತನಿಂದ ಏನೇನೆಲ್ಲ  ಕೆಲಸಗಳನ್ನು ಮಾಡಿಸುತ್ತದೆ, ಅಷ್ಟಕ್ಕೂ ಆ ಅನಾಮಿಕ ವ್ಯಕ್ತಿಯ ಮಾತುಗಳನ್ನು ರಾಘು ಯಾಕೆ ಕೇಳಬೇಕು, ಈ ಎಲ್ಲ ಪ್ರಶ್ನೆಗಳಿಗೆ  ಉತ್ತರ ಬೇಕೆಂದರೆ ಒಮ್ಮೆ ರಾಘು ಚಿತ್ರವನ್ನು ಕಣ್ತುಂಬಿಕೊಳ್ಳಬೇಕು.  

ಇಲ್ಲಿ ಪ್ರೀತಿಯ ಬಂಧನವಿದೆ, ಸ್ನೇಹದ ವ್ಯಾಖ್ಯಾನವಿದೆ, ರಾಘು ಪಾತ್ರವನ್ನು  ವಿಜಯ್ ರಾಘವೇಂದ್ರ ಒಬ್ಬರೇ  ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರ ಆದ್ಭುತ ಪರ್ ಫಾರ್ಮನ್ಸ್ ಗೆ ಪೂರ್ಣ ಅಂಕ ಕೊಡಲೇಬೇಕು. ಜೀವನದಲ್ಲಿ ನಾವು ತೆಗೆದುಕೊಂಡಂಥ ತಪ್ಪು ನಿರ್ಧಾರಗಳು ಕೊನೇವರೆಗೆ ನಮ್ಮನ್ನು  ಪ್ರತಿಬಿಂಬದ ರೂಪದಲ್ಲಿ ಕಾಡುತ್ತಲೇ ಇರುತ್ತವೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಿದ್ದಾರೆ. 
  ನಿರ್ದೇಶಕ ಆನಂದ್‌ರಾಜ್ ಮೊದಲ ಪ್ರಯತ್ನದಲ್ಲೇ ಭರವಸೆ ಮೂಡಿಸಿದ್ದಾರೆ.  ಒಂದೇ ಪಾತ್ರವಿದ್ದರೂ,  ಕುತೂಹಲಕಾರಿಯಾಗಿ  ಕಥೆ ನಿರೂಪಿಸಿದ್ದಾದೆ ಮತ್ತು ಹೆಚ್ಚು ಏಕತಾನತೆ ಕಾಡುವುದಿಲ್ಲ ಅನ್ನೋದು ಪ್ಲಸ್ ಪಾಯಿಂಟ್. ಚಿತ್ರದ ಸಂಭಾಷಣೆ  ಉತ್ತಮವಾಗಿದೆ.  ರಾಘು ಸಿನಿಮಾ ಮೇನ್‌ಪಿಲ್ಲರ್ ಎಂದರೆ  ಹಿನ್ನೆಲೆ ಸಂಗೀತ. ಒಂದು ಕ್ರೈಮ್ ಥ್ರಿಲ್ಲರ್ ಸಿನಿಮಾಗೆ ಬೇಕಾದ  ಹಿನ್ನೆಲೆ ಸಂಗೀತವನ್ನು ಸಂಗೀತ ನಿರ್ದೇಶಕ ರಿತ್ವಿಕ್ ಮುರಳಿಧರ್ ಅವರು ನೀಡಿದ್ದಾರೆ. ಉದಯ್‌ಲೀಲಾ  ಅವರ  ಕ್ಯಾಮೆರಾ ವರ್ಕ್ ಉತ್ತಮವಾಗಿದೆ. ಬಹುತೇಕ  ಭಾಗವನ್ನು ರಾತ್ರಿ ವೇಳೆಯಲ್ಲೇ ಚಿತ್ರೀಕರಿಸಲಾಗಿದೆ. ಕಥೆ ನಡೆಯುವುದೂ ಒಂದೇ ರಾತ್ರಿಯಲ್ಲಿ, ಹೊಸತನದ ಥ್ರಿಲ್ಲರ್  ಇಷ್ಟಪಡುವವರು ಖಂಡಿತ ರಾಘು ಚಿತ್ರವನ್ನು ವೀಕ್ಷಿಸಬೇಕು,
 
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed